ಪಟಾಕಿಗಳ ಸದ್ದು ಬೇಡ,ಹಣತೆಗಳ ಬೆಳಕು ಬೇಕು
ಅಕ್ಟೋಬರ್ - 25, 2011
ಮತ್ತೆ ದೀಪಾವಳಿ ಬಂದಿದೆ. ಈ ದೀಪಾವಳಿಗೆ ರಾಜ್ಯ ಸರಕಾರ ಕಗ್ಗತ್ತಲನ್ನೇ ಉಡುಗೊರೆಯಾಗಿ ಕೊಟ್ಟಿದೆ. ಸ್ವತಃ ಕತ್ತಲಲ್ಲಿ ಕೊಳೆಯುತ್ತಿರುವವರು ಇನ್ನೊಬ್ಬರಿಗೆ ಕತ್ತಲನ್ನಲ್ಲದೆ ಇನ್ನೇನನ್ನು ಉಡುಗೊರೆಯಾಗಿ ನೀಡಬಲ್ಲರು? ಈ ಕತ್ತಲು ನಾಡಿನ ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ, ಅದರಾಚೆಗೂ ವಿಸ್ತರಿಸಿಕೊಂಡಿದೆ.ಭ್ರಷ್ಟಾಚಾರ ನಾಡನ್ನು ಕಗ್ಗತ್ತಲ್ಲ ರೂಪದಲ್ಲಿ ಆವರಿಸಿಕೊಂಡಿದೆ. ಪ್ರಶ್ನಿಸಬೇಕಾದ ಪ್ರಜೆಗಳೂ ಅದರ ಮುಂದೆ ನಿಸ್ಸಹಾಯಕರಾಗಿದ್ದಾರೆ.ಆದರೂ ಹಲವು ಭ್ರಷ್ಟರು ಜೈಲು ಸೇರಿದ್ದಾರೆ. ಅವರಲ್ಲಿ ಈ ನಾಡಿನ ಮಾಜಿ ಮುಖ್ಯಮಂತ್ರಿಯೂ ಒಬ್ಬರು. ಕಳೆದ ದೀಪಾವಳಿಯಂದು ನಾಡಿನ ಜನತೆಗೆ ಶುಭಾಶಯ ಹೇಳಿದ್ದ ಗಣ್ಯರು ಈ ಬಾರಿಯ ದೀಪಾವಳಿಯನ್ನು ಪರಪ್ಪನ ಅಗ್ರಹಾರದಲ್ಲಿ ಆಚರಿಸುವಂತಾಗಿದೆ. ಕಗ್ಗತ್ತಲಿನ ನಡುವೆಯೇ ನಮ್ಮನ್ನು ಮುನ್ನಡೆಸಬಲ್ಲ ಸಣ್ಣ ಬೆಳಕಿನ ಕಿರಣ ಇದು. ಕತ್ತಲು-ಬೆಳಕಿನ ಈ ಸಂಘರ್ಷದ ನಡುವೆಯೇ ನಾವು ದೀಪಾವಳಿಯನ್ನು ಮತ್ತೆ ಸಂಭ್ರಮದಿಂದ ಸ್ವಾಗತಿಸುತ್ತಿದ್ದೇವೆ.
ದೀಪಾವಳಿ ಭಾರತದಲ್ಲಿ ಒಂದು ಧರ್ಮದ ಹಬ್ಬವಾಗಿ ಗುರುತಿಸಲ್ಪಡುತ್ತಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಈ ಸಂದರ್ಭವನ್ನು ಜನರು ಸಂಭ್ರಮದಿಂದ ಸ್ವಾಗತಿಸುತ್ತಾರೆ. ದೀಪಾವಳಿಯ ಆಶಯವೇ ಕತ್ತಲಿಂದ ಬೆಳಕಿನಡೆಗೆ ಸಾಗುವುದು. ಅದಕ್ಕಾಗಿಯೇ ಇದನ್ನು ಬೆಳಕಿನ ಹಬ್ಬವೆಂದು ಕರೆಯುವುದು. ಆದರೆ, ಈ ಹಬ್ಬದ ದಿನವೇ ಮಕ್ಕಳೂ ಸೇರಿದಂತೆ ನೂರಾರು ಜನರ ಬದುಕು ಕತ್ತಲಿಗೆ ಸರಿಯುವುದನ್ನು ನಾವು ನೋಡುತ್ತಾ ಬರುತ್ತಿದ್ದೇವೆ. ಪ್ರತಿ ವರ್ಷ ನೂರಾರು ಮಕ್ಕಳು ಪಟಾಕಿ ಸಿಡಿಸಿ, ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವರ ಬದುಕು ಶಾಶ್ವತ ಕತ್ತಲಿಗೆ ತಳ್ಳಲ್ಪಟ್ಟಿದೆ. ಆದರೆ ಹಬ್ಬದ ಸಂಭ್ರಮ, ಆಚರಣೆ, ಗದ್ದಲದ ಹೆಸರಿನಲ್ಲಿ ಪಟಾಕಿಯ ಸಂಗವನ್ನು ನಾವು ಇನ್ನೂ ತೊರೆದಿಲ್ಲ. ಪಟಾಕಿಯಿಲ್ಲದೆ ದೀಪಾವಳಿಯಿಲ್ಲ ಎನ್ನುವ ಭ್ರಮೆಯಿಂದ ಹೊರಗೆ ಬಂದಿಲ್ಲ.
ದೀಪಾವಳಿ ಹಬ್ಬವನ್ನು ಪಟಾಕಿಗಳ ಹಬ್ಬವಾಗಿ ಮಾರ್ಪಡಿಸಿರುವುದು ಉದ್ಯಮಿಗಳು. ಒಂದು ರೀತಿಯಲ್ಲಿ ಪಟಾಕಿಗೂ ದೀಪಾವಳಿಗೂ ಯಾವುದೇ ಸಂಬಂಧವಿಲ್ಲ. ದೀಪಾವಳಿಯನ್ನು ಅರ್ಥಪೂರ್ಣವಾಗಿಸುವುದು ಹಚ್ಚಿಟ್ಟ ಹಣತೆಯೇ ಹೊರತು ಪಟಾಕಿಗಳಲ್ಲ. ಪಟಾಕಿ ಒಂದು ಕ್ಷಣ ಸದ್ದು ಮಾಡುತ್ತಾ ಉರಿದು ಮುಗಿದು ಹೋಗುತ್ತದೆ. ನಮ್ಮಲ್ಲಿ ಮತ್ತೆ ಕತ್ತಲನ್ನು ತುಂಬುತ್ತದೆ. ಆದರೆ ಹಣತೆ ಹಾಗಲ್ಲ, ಅದು ಯಾವುದೇ ಸದ್ದು ಮಾಡದೆಯೇ ಒಳ, ಹೊರಗನ್ನು ಬೆಳಗುತ್ತದೆ. ಪಟಾಕಿಯ ಆಕರ್ಷಣೆ ಕೆಲವು ಕ್ಷಣಗಳಿಗೆ ಸೀಮಿತವಾದುದು. ಅದರ ಬಳಿಕ ಅದು ನಮ್ಮಲ್ಲಿ ಏಕಾಂತತೆಯನ್ನು, ಕತ್ತಲನ್ನು ಉಳಿಸಿ ಹೋಗುತ್ತದೆ. ಆದರೆ ಕೆಲವೇ ಕೆಲವು ಕ್ಷಣಗಳ ಆಕರ್ಷಣೆಗಾಗಿ ಕೆಲವೊಮ್ಮೆ ನಾವು ಇಡೀ ಬದುಕನ್ನೇ ಬಲಿ ಕೊಡಬೇಕಾಗುತ್ತದೆ. ಇದು ದೀಪಾವಳಿ ಹಬ್ಬ ಸಾರುವ ವೌಲ್ಯಗಳಿಗೆ ನಾವು ಮಾಡುವ ಕಳಂಕ.
ಪಟಾಕಿಗೂ ದೀಪಾವಳಿಗೂ ಯಾವುದೇ ಸಂಬಂಧವಿಲ್ಲ ಮಾತ್ರವಲ್ಲ, ದೀಪಾವಳಿ ಸಾರುವ ಎಲ್ಲ ವೌಲ್ಯಗಳನ್ನೂ ಪಟಾಕಿ ಒಂದು ಕ್ಷಣದಲ್ಲಿ ಸುಟ್ಟು ಬೂದಿ ಮಾಡುತ್ತದೆ. ಒಂದು ತುತ್ತು ಅನ್ನಕ್ಕೂ ಪರದಾಡುತ್ತಿರುವ ಕುಟುಂಬಗಳಿರುವ ಈ ದೇಶದಲ್ಲಿ ಒಂದು ಕ್ಷಣದ ಆಕರ್ಷಣೆಗಾಗಿ ಸಾವಿರಾರು ರೂಪಾಯಿಗಳನ್ನು ಸುಟ್ಟು ಹಾಕುವುದು ಕ್ರೌರ್ಯದ ಪರಮಾವಧಿ. ಇದು ಹಬ್ಬ ಆಚರಿಸುವ ರೀತಿಯೇ ಅಲ್ಲ. ಪಕ್ಕದ ಮನೆಯ ಮಕ್ಕಳು ಹಸಿದಿರುವಾಗ ನಾವು ಹಬ್ಬ ಆಚರಿಸಿ ಸಂಭ್ರಮಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಆದುದರಿಂದ ಪಟಾಕಿಗಳಿಗೆ ವ್ಯಯ ಮಾಡುವ ಹಣವನ್ನು ಉಳಿದ ಬಡವರಿಗೆ ಹಂಚಿದರೆ ದೀಪಾವಳಿ ಇನ್ನಷ್ಟು ಸುಂದರವಾಗುತ್ತದೆ ಮಾತ್ರವಲ್ಲ, ಅರ್ಥಪೂರ್ಣವಾಗುತ್ತದೆ. ಹಸಿದವರ ಕಣ್ಣಲ್ಲಿ ಮಿನುಗುವ ಹಣತೆ ದೀಪಾವಳಿಯ ನಿಜವಾದ ಬೆಳಕು. ಅವರ ನಗು ದೀಪಾವಳಿಯ ನಿಜವಾದ ಪಟಾಕಿ.
ಪಟಾಕಿಯ ಹಿಂದೆ ಸಹಸ್ರಾರು ಮಕ್ಕಳ ದುರಂತ ಗಾಥೆಯಿದೆ. ಪಟಾಕಿಗಳನ್ನು ತಯಾರಿಸಲು ಬಳಸುವುದೇ ಮಕ್ಕಳನ್ನು. ಗಂಧಕದ ನಡುವೆ ಆರೋಗ್ಯವನ್ನು, ಬದುಕನ್ನು ಕಳೆದುಕೊಂಡು ಯಾವುದೋ ಶ್ರೀಮಂತ ಮಕ್ಕಳ ತೆವಲು ತೀರಿಸುವುದಕ್ಕಾಗಿ ಪಟಾಕಿಗಳ ಕಾರ್ಖಾನೆಯಲ್ಲಿ ಈ ಮಕ್ಕಳು ದಿನದೂಡುತ್ತಿದ್ದಾರೆ. ಪ್ರತಿ ವರ್ಷ ಪಟಾಕಿ ಕಾರ್ಖಾನೆಗಳಿಗೆ ಬೆಂಕಿ ಬಿದ್ದು ಹಲವು ಮಕ್ಕಳು ಬರ್ಬರವಾಗಿ ಸಾಯುತ್ತಿರುವುದನ್ನು ಮಾಧ್ಯಮದಲ್ಲಿ ನೋಡುತ್ತಲೇ, ನಾವು ಪಟಾಕಿಗಳನ್ನು ಕೊಂಡು ನಮ್ಮ ಮಕ್ಕಳನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತೇವೆ. ಪಟಾಕಿಯ ಸದ್ದಿನಲ್ಲಿ ಬದುಕು ಕಳೆದುಕೊಂಡ ಈ ಮಕ್ಕಳ ಆರ್ತನಾದವನ್ನು ನಾವು ಆಲಿಸಬೇಕಾಗಿದೆ.
ಪಟಾಕಿಗಳಿಂದಾಗಿ ದೇಶದಲ್ಲಿ ಪ್ರತಿ ವರ್ಷ ನೂರಾರು ದುರಂತಗಳು ಸಂಭವಿಸುತ್ತಿದ್ದರೂ,ಅದರ ಕಡೆ ಸರಕಾರ ಕುರುಡಾಗಿದೆ. ಇಂದು ದೇಶದಲ್ಲಿ ಪಟಾಕಿ ತಯಾರಿಕೆಯ ಹೆಸರಿನಲ್ಲೇ ಸ್ಫೋಟಕಗಳನ್ನು ಕೂಡ ತಯಾರಿಸುತ್ತಿದ್ದಾರೆ. ದುಷ್ಕರ್ಮಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲ ಸರಕಾರಕ್ಕೆ ಗೊತ್ತಿಲ್ಲದಿಲ್ಲ. ಆದರೂ ಪಟಾಕಿಯನ್ನು ನಿಷೇಧಿಸಲು ಸರಕಾರ ಹಿಂದೆ ಮುಂದೆ ನೋಡುತ್ತಿದೆ. ಇದರ ಹಿಂದೆ ಬೃಹತ್ ಉದ್ಯಮಿಗಳ ಕೈವಾಡವಿದೆಯೆನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸ ಬೇಕಾಗಿಲ್ಲ.
ನಿಜಕ್ಕೂ ದೀಪಾವಳಿಯ ಹಿನ್ನೆಲೆಯಲ್ಲಿ ನಮ್ಮ ಜನರಿಗೆ ಯಾವುದಾದರೂ ಉಡುಗೊರೆ ಯನ್ನು ನೀಡುವ ಉದ್ದೇಶವಿದ್ದರೆ, ಸರಕಾರ ಪಟಾಕಿಯನ್ನು ನಿಷೇಧಿಸುವ ಮೂಲಕ ಅದನ್ನು ನೀಡಲಿ. ದೀಪಾವಳಿ ಹಣತೆಯ ಮೂಲಕ ಜನಮನವನ್ನು ಬೆಳಗಲಿ. ಪರಸ್ಪರ ಸಾಂತ್ವನ, ಸೌಹಾರ್ದ,ನೆರವು ಇತ್ಯಾದಿಗಳ ಮೂಲಕ ದೀಪಾವಳಿಯ ಉದ್ದೇಶವನ್ನು ಇನ್ನಷ್ಟು ಅಥ೯ ಪೂರ್ಣಗೊಳಿಸೊಣ. ದೀಪಾವಳಿ ಹಬ್ಬ ನಾಡನ್ನು, ದೇಶವನ್ನು, ವಿಶ್ವವನ್ನು ಬೆಳಕಿನೆಡೆಗೆ ಮುನ್ನಡೆಸಲಿ.
ಹೊಸದಿಲ್ಲಿ ಮೂಲದ ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ(ಎನ್‌ಸಿಎಇಆರ್)ಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಅಬೂಸಾಲಿಹ್ ಶರೀಫ್, ‘ಭಾರತದಲ್ಲಿ ಮುಸ್ಲಿಮ್ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ’ಗಳ ಕುರಿತು ವರದಿ ರಚಿಸಿರುವ ಸಾಚಾರ್ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿದ್ದರು. 2005-06ರ ಅವಧಿಯಲ್ಲಿ ಪ್ರಧಾನಿಯವರ ಉನ್ನತ ಮಟ್ಟದ ಸಮಿತಿಯು ಈ ವರದಿ ರಚಿಸಿತ್ತು. 2006ರ ನವೆಂಬರ್ 6ರಂದು ಈ ವರದಿ ಸಲ್ಲಿಕೆಯಾಗಿದೆ. ಆದರೆ ಇದರ ಶಿಫಾರಸುಗಳನ್ನು ಜಾರಿಗೊಳಿಸಲು ಸರಕಾರ ಹೆಚ್ಚಿನ ಪ್ರಯತ್ನವೇನೂ ಮಾಡಿಲ್ಲ ಎಂದು ಹೇಳುವ ಶರೀಫ್, ಈ ಕುರಿತು ಸುದ್ದಿ ಸಂಸ್ಥೆಯೊಂದರ ತ್ರಿಥೇಶ್ ನಂದನ್ ಎಂಬವರಿಗೆ ನೀಡಿರುವ ಸಂದರ್ಶನಲ್ಲಿ ಪ್ರಸ್ತುತ ದೇಶದ ಮುಸ್ಲಿಮರ ಸ್ಥಿತಿಗತಿಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಯುಪಿಎ ಸರಕಾರ ಮುಸ್ಲಿಮರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಶರೀಫ್ ಹೇಳಿದ್ದಾರೆ. ಆ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
ಪ್ರಶ್ನೆ: ಸಾಚಾರ್ ಸಮಿತಿಯು ತನ್ನ ಶಿಫಾರಸುಗಳನ್ನು ನೀಡಿ ಐದು ವರ್ಷಗಳಾಗುತ್ತಾ ಬಂದಿವೆ. ಇದೀಗ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ಹೇಗಿದೆ?
ಶರೀಫ್: ಸಾಚಾರ್ ಸಮಿತಿಯು ರೋಗ ಪತ್ತೆ ಸಲಕರಣೆಯಿದ್ದಂತೆ. ಪ್ರಗತಿಯಲ್ಲಿ ಮುಸ್ಲಿಮರಲ್ಲಿನ ಪರಿವರ್ತನೆ ನಿಧಾನವಾಗು ತ್ತಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಇದು ಎಲ್ಲ ಸಮುದಾಯಗಳಿಗೂ ಧನಾತ್ಮಕ ವಾಗಿದೆ. ಇತರ ಸಮುದಾಯಗಳು ಮೊಲಗಳಂತೆ ವೇಗವಾಗಿ ಪ್ರಗತಿ ಹೊಂದುತ್ತಿದ್ದರೆ, ಮುಸ್ಲಿಮರ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಅದರಲ್ಲಿ ಒಂದು ಪ್ರಮುಖ ವಿಷಯವೆಂದರೆ, ಮುಸ್ಲಿಮರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಿ ಇದು ಸಂಪೂರ್ಣ ತದ್ವಿರುದ್ಧವಾಗಿದೆ.
ಆದರೆ, ಐದು ವರ್ಷಗಳ ಬಳಿಕ ಸರಕಾರ ಏನು ಮಾಡಿದೆ? ಸಾಚಾರ್ ಸಮಿತಿಯು ಮುಸ್ಲಿಮರಿಗೆ ಶಾಲೆಗಳಾಗಬೇಕು ಎಂದು ಬಯಸಿತ್ತು. ಆದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮದ್ರಸಗಳನ್ನು ಪ್ರವರ್ತಿಸಿದೆ. ಮುಸ್ಲಿಂ ಮಕ್ಕಳಿಗೆ ಮದ್ರಸಗಳು ಬೇಕೆಂದು ಯಾರು ಕೇಳಿದರು? ಯುಪಿಎ ಸರಕಾರ ಮುಸ್ಲಿಮರನ್ನು ಮೂರ್ಖರೆಂದು ತಿಳಿದಿದೆ ಮತ್ತು ಮದ್ರಸಗಳನ್ನು ಆಧುನಿಕೀಕರಣ ಗೊಳಿಸುತ್ತಿರುವುದಾಗಿ ಹೇಳಿ ಅದು ಮುಸ್ಲಿಮರನ್ನು ಮೂರ್ಖರನ್ನಾಗಿಸುತ್ತಿದೆ. ಮುಸ್ಲಿಮರಲ್ಲಿ ಕೇವಲ 3 ಶೇ. ಮಕ್ಕಳು ಮಾತ್ರ ಮದ್ರಸಕ್ಕೆ ಹೋಗುತ್ತಿದ್ದಾರೆ, ಉಳಿದ ಎಲ್ಲ ಶೇ.97 ಮಕ್ಕಳಿಗೆ ಸಾಮಾನ್ಯ ಶಾಲೆಗಳ ಆವಶ್ಯಕತೆ ಯಿದೆ ಎಂದು ನಾವು ತಿಳಿಸಿದ್ದೆವು. ಮುಸ್ಲಿಮರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಾಚಾರ್ ಸಮಿತಿಯು ಅಡಿಗೆರೆ ಹಾಕಿರುವ ಸಂದೇಶಗಳನ್ನು ಸರಕಾರ ಪರಿಗಣಿಸಿಯೇ ಇಲ್ಲ.
ಪ್ರಶ್ನೆ: ಮುಸ್ಲಿಮರ ಸ್ಥಿತಿಗತಿಗಳನ್ನು ನೋಡಿಕೊಳ್ಳಲು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವನ್ನು 2006ರಲ್ಲಿ ರಚಿಸಲಾಗಿದೆ. ಇದರ ಉದ್ದೇಶ ಪೂರ್ತಿಯಾಗುತ್ತಿದೆಯೇ?
ಶರೀಫ್: ಅಲ್ಪ ಸಂಖ್ಯಾತರ ಸಚಿವಾಲಯವನ್ನು ತೆರೆದು ಸರಕಾರ ಮತ್ತೊಂದು ತಪ್ಪು ಹೆಜ್ಜೆ ಇಟ್ಟಿದೆ. ವಿಶೇಷ ಸಚಿವಾಲಯವನ್ನು ಯಾರು ಬಯಸಿದ್ದರು? ಸಾಚಾರ್ ಸಮಿತಿಯು ಯಾವತ್ತೂ ಅದನ್ನು ಶಿಫಾರಸು ಮಾಡಿರಲಿಲ್ಲ. ಮುಸ್ಲಿಮರು ಇದೀಗ ಪ್ರತಿಯೊಂದು ಸಣ್ಣ ವಿಷಯಕ್ಕೂ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಹೋಗುತ್ತಿದ್ದಾರೆ. ನಿಮಗೆ ಸಾಲ ಬೇಕಾದಲ್ಲಿ ನೀವು ಬ್ಯಾಂಕ್‌ಗೆ ಹೋಗಬೇಕು, ಅಲ್ಪ ಸಂಖ್ಯಾತ ಸಚಿವಾಲಯವು ಮಾಡುವುದೇನಿದೆ? ನಿಮಗೆ ಶಾಲೆ ಬೇಕಾದರೆ, ನೀವು ಶಿಕ್ಷಣ ಇಲಾಖೆಗೆ ಹೋಗಬೇಕು, ಅಲ್ಪ ಸಂಖ್ಯಾತರ ಸಚಿವಾಲಯ ಏನು ಮಾಡಬಹುದು? ಅಲ್ಪಸಂಖ್ಯಾತ ಸಚಿವಾಲಯವನ್ನು ರಚಿಸುವ ಮೂಲಕ ಸರಕಾರ ಮುಸ್ಲಿಮರನ್ನು ಪ್ರತ್ಯೇಕಗೊಳಿಸಿದೆ.
ಪ್ರತಿಯೊಂದು ಸಣ್ಣ ವಿಷಯಕ್ಕೂ ಮುಸ್ಲಿಮರು ಅಲ್ಪ ಸಂಖ್ಯಾತರ ಸಚಿವಾಲಯವನ್ನು ಸಂಪರ್ಕಿಸುವುದನ್ನು ನಾವು ಇಚ್ಛಿಸುವುದಿಲ್ಲ. ಅವರ ಸಮಸ್ಯೆ ಹಾಗೂ ಹಕ್ಕುಗಳ ಕುರಿತು ದೇಶದ ಪ್ರತಿಯೊಬ್ಬ ಪ್ರಜೆಯು ಸಂಪರ್ಕಿಸುವ ಮುಖ್ಯ ಇಲಾಖೆಗಳು ಮತ್ತು ಸಂಸ್ಥೆಗಳೇ ನಿರ್ವಹಿಸಬೇಕು. ಆದರೆ ಶಾಲೆಗಳಲ್ಲಿ ಮುಸ್ಲಿಮರ ಪ್ರವೇಶಾತಿಗಳನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ಒಂದೇ ಒಂದು ಪದವನ್ನು ಎಚ್‌ಆರ್‌ಡಿ ಸಚಿವಾಲಯ ಬರೆದಿಲ್ಲ. ಪ್ರದೇಶ, ರಾಜ್ಯ ಅಥವಾ ಜಿಲ್ಲೆಗಳಲ್ಲಿನ ಮುಸ್ಲಿಮರ ಜನ ಸಂಖ್ಯೆಗೆ ಅನುಗುಣವಾಗಿ ಅಲ್ಪ ಸಂಖ್ಯಾತರಿಗೆ ಬ್ಯಾಂಕ್‌ಗಳು ಸಾಲ ನೀಡಬೇಕು ಎಂಬ ನಿಯಮವಿದೆ. ಭಾರತದಾದ್ಯಂತ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 15ರಷ್ಟಿದೆ. ಮುಸ್ಲಿಮರಿಗೆ ಬ್ಯಾಂಕ್‌ಗಳು ಸಾಲ ನೀಡಬೇಕು ಎಂಬುದನ್ನು ನಾವು ಬಯಸುತ್ತಿದ್ದೇವೆ. ಬ್ಯಾಂಕ್‌ಗಳು ಸಾಲ ನಿರಾಕರಿಸಿದಾಗ, ಅಲ್ಪಸಂಖ್ಯಾತ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಮುಸ್ಲಿಂ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ ಬಳಿ ತೆರಳಬೇಕು ಎಂದು ಸರಕಾರ ಹೇಳುತ್ತದೆ. ಆದರೆ ಅದರಲ್ಲಿರುವ ನಿಧಿ ತುಂಬಾ ಸೀಮಿತ. ಇದ್ದ ನಿಧಿಯಲ್ಲೂ ದೊಡ್ಡ ಪಾಲು ಬ್ಯಾಂಕ್‌ಗಳಲ್ಲೇ ಇವೆ. ಕೆಲವು ಮುಸ್ಲಿಂ ಗುಂಪುಗಳನ್ನು ಖುಷಿ ಪಡಿಸಲು ಸರಕಾರ ಇಂತಹ ಸಂಸ್ಥೆಯನ್ನು ನಿರ್ಮಿಸಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಮುಖ್ಯ ಉದ್ದೇಶ ಕಳೆದುಹೋಗಿದೆ. ಸಾಚಾರ್ ಸಮಿತಿಯ ಶಿಫಾರಸುಗಳು ಬಂದು ಐದು ವರ್ಷಗಳಾದರೂ ಹತಾಶೆ ಮುಂದುವರಿದಿದೆ. ಸರಕಾರವು ಸಮಿತಿಯ ಶಿಫಾರಸುಗಳಿಗಿಂತ ಸಂಪೂರ್ಣ ತದ್ವಿರುದ್ಧವಾದ ವಿಷಯಗಳನ್ನೇ ಜಾರಿಗೊಳಿಸುತ್ತಿದೆ.
ಯುಪಿಎ ಸರಕಾರ ಗುರುತಿಸಿಕೊಳ್ಳುವಿಕೆಯ ರಾಜಕಾರಣ ಮಾಡುತ್ತಿದೆ, ಇದನ್ನು ಬಿಜೆಪಿ ಕೂಡ ವಿರೋಧಿಸುತ್ತಿದೆ. ಇಂತಹ ಗುರುತಿಸುವಿಕೆಯ ರಾಜಕಾರಣದಿಂದ ಮುಸ್ಲಿಮರಿಗೆ ಯಾವುದೇ ಲಾಭವಾಗುವುದಿಲ್ಲ. ವಕ್ಫ್ ಮಂಡಳಿ, ಮದ್ರಸಗಳ ಬಗ್ಗೆ ನನ್ನದೇನೂ ತಕರಾರಿಲ್ಲ. ಆದರೆ ವಿಶ್ವ ವಿದ್ಯಾಲಯಗಳಲ್ಲಿ ಶೇ.15ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರಬೇಕಾ ದುದನ್ನು ಅವುಗಳು ನೋಡಿಕೊಳ್ಳ ಬೇಕಾಗಿದೆ. ದಲಿತರು ಪ್ರತಿ ವರ್ಷ ಉತ್ತಮ ಅವಕಾಶಗಳನ್ನು ಪಡೆಯು ತ್ತಿದ್ದಾರೆ, ಆದರೆ ಮುಸ್ಲಿಮರಿಗೆ ಇವು ದೊರಕುತ್ತಿಲ್ಲ. ದಲಿತರಲ್ಲಿ ಪ್ರಗತಿಯ ಪ್ರಮಾಣ ಶೇ.5ರಷ್ಟಿದೆ. ಆದರೆ ಮುಸ್ಲಿಮರಲ್ಲಿ ಅದು ಕೇವಲ ಶೇ.0.6ರಷ್ಟಿದೆ.
ಪ್ರಶ್ನೆ: ಹಾಗಾದರೆ, ಸರಕಾರದ ಉದ್ದೇಶಗಳ ಬಗ್ಗೆ ನಿಮಗೆ ಸಂಶಯಗಳಿವೆ?
ಶರೀಫ್: ನಾವು ಮೂಲ ವಿನ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು. ಸಾಚಾರ್ ಸಮಿತಿಯ ನೇಮಕದ ನಿರ್ಧಾರವನ್ನು ಕೈಗೊಂಡವರು ಪ್ರಧಾನಿ, ಕಾಂಗ್ರೆಸ್ ಪಕ್ಷವಲ್ಲ. ಆದರೆ ಅದು ಪ್ರಧಾನಿಯ ನಿರ್ಧಾರದ ಬಗ್ಗೆ ಬಳಿಕವಷ್ಟೇ ಸಮ್ಮತಿ ಸೂಚಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನೀತಿಗಳು ಉತ್ತಮವಾಗಿವೆ. ಆದರೆ ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯಗಳ ವಿಷಯದ ಕುರಿತು ಬರುವಾಗ ಅದು ತನ್ನ ಕರ್ತವ್ಯವನ್ನು ನಿಭಾಯಿಸಲು ಹಿಂದೇಟು ಹಾಕುತ್ತಿದೆ. ಸಾಚಾರ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸದಿರುವುದೇ ಅದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರಿಗೆ ಸ್ಥಳಾವಕಾಶ ನೀಡುವಂತೆ ನಾವು ಕೇಳುತ್ತಿದ್ದೇವೆ. ಇದು ಸಮುದಾಯದ ಸದಸ್ಯರನ್ನು ಶಿಕ್ಷಿತರನ್ನಾಗಿಸುವ ವಿಷಯ ಅದರಲ್ಲಿದೆ. ಆದರೆ ಸರಕಾರ ಅದನ್ನು ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಅಭಿವೃದ್ಧಿಯೂ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಉದ್ಯೋಗ ವಿಷಯದಲ್ಲಿ ನೋಡಿದರೆ, ಮುಸ್ಲಿಮರಿಗೆ ಉದ್ಯೋಗ ನೀಡುವುದರಲ್ಲಿ ಗುಜರಾತ್ ಸರಕಾರ ತೀರಾ ಹಿಂದಿದೆ ಎಂಬುದನ್ನು ಸಾಚಾರ್ ಸಮಿತಿಯು ಪತ್ತೆ ಹಚ್ಚಿದೆ. ಅಲ್ಲಿ ಮುಸ್ಲಿಮರು ಅಧಿಕವಾಗಿರುವ ಗ್ರಾಮಗಳಲ್ಲಿ ವಾಹನ ಸಂಚಾರ ಮಾಡಬಹುದಾದ ರಸ್ತೆಗಳೇ ಇಲ್ಲ, ಬೇರೆ ಗ್ರಾಮಗಳಲ್ಲಿ ಅದು ಇದೆ. ತುಂಬಾ ವರ್ಷಗಳ ಬಳಿಕ ಕಳೆದ ಜುಲೈನಲ್ಲಿ ನಾನು ನನ್ನ ಗ್ರಾಮಕ್ಕೆ ತೆರಳಿದ್ದೆ. ಅದು ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿದೆ. ಆದರೆ ಅಲ್ಲೇನೂ ಹೆಚ್ಚು ಬದಲಾವಣೆಗಳಾದಂತೆ ನನಗೆ ಅನಿಸಲಿಲ್ಲ. ಮುಸ್ಲಿಮರು ಅಧಿಕವಾಗಿರುವ ಗ್ರಾಮಗಳಲ್ಲಿ ವಾಹನ ಸಂಚರಿಸಬಹುದಾದ ರಸ್ತೆಗಳಿಲ್ಲ, ಆದರೆ ಬೇರೆ ಗ್ರಾಮಗಳಲ್ಲಿ ಅವು ಇವೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ಸಾರ್ವಜನಿಕ ಅವಕಾಶಗಳನ್ನು ನೀಡಬೇಕು, ಅದು ಆತ ಯಾವುದೇ ಸಮುದಾಯಕ್ಕೆ ಸೇರಿದ್ದವನಾದರೂ ಸರಿ. ಮೂಲಭೂತ ಸೌಕರ್ಯಗಳು, ಗುರುತಿಸುವಿಕೆ, ಹಕ್ಕುಗಳನ್ನು ಪೂರೈಸುವು ದರಲ್ಲಿ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಗುರುತಿಸುವಿಕೆಯು ಯಾವುದೇ ಪಾತ್ರವನ್ನು ಹೊಂದಿರ ಕೂಡದು. ಇದು ಸರಕಾರದ ಬಗೆಗಿನ ನನ್ನ ಆಕ್ಷೇಪವಾಗಿದೆ. ಇದು ಗಂಭೀರ ಆಡಳಿತಾತ್ಮಕ ವಿಷಯವೂ ಹೌದು.
ಪ್ರಶ್ನೆ: 12ನೆ ಪಂಚವಾರ್ಷಿಕ ಯೋಜನೆಗೆ ಅಂತಿಮ ಪತ್ರವನ್ನು ಸಿದ್ಧಪಡಿಸಿರುವ ಯೋಜನಾ ಆಯೋಗದ ಮುಂದೆ ನಿಮ್ಮ ನಿಲುವನ್ನು ವ್ಯಕ್ತ ಪಡಿಸಿದ್ದೀರಾ?
ಶರೀಫ್: ಯೋಜನಾ ಆಯೋಗದ ನಿಲುವುಗಳಲ್ಲೇ ಕೊರತೆಯಿದೆ. ನೀವು ಯಾವುದೇ ಅಭಿವೃದ್ಧಿ ಕಾರ್ಯ ವನ್ನು ಕೈಗೊಳ್ಳಿ, ಅಂತಹ ಸೇವೆಗಳಲ್ಲಿ ಸಮಾನತೆಯನ್ನು ಕಾಪಾಡಬೇಕು ಎನ್ನುವುದು ಸಾಚಾರ್ ಸಮಿತಿಯ ಸಿದ್ಧಾಂತವಾಗಿದೆ. ಅಂತಹ ಕಾರ್ಯಕ್ರಮಗಳಲ್ಲಿ ಸಮಾನತೆಯನ್ನು ಸಾಧಿಸಲಾಗಿ ದೆಯೇ ಎಂಬುದನ್ನು ಪರಿಶೀಲಿಸಲು ವ್ಯವಸ್ಥೆಯೊಂದನ್ನು ನೀವು ರೂಪಿಸಬೇಕಾ ಗಿದೆ. ಅದನ್ನು ನೀವು ಬಯಸಿದಲ್ಲಿ, ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಬೇಕಾಗುತ್ತದೆ. ಸರಕಾರದ ಕಾರ್ಯಕ್ರಮಗಳಲ್ಲಿ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಅದು ಕಾರ್ಯ ನಿರ್ವಹಿಸಬೇಕಾಗಿದೆ. ಅದರೊಂದಿಗೆ ವೈವಿಧ್ಯತೆಯ ಸೂಚ್ಯಂಕವನ್ನೂ ಹೊಂದಿರಬೇಕಾಗುತ್ತದೆ. ಅದರಲ್ಲಿ ನಿಮ್ಮ ಕಾರ್ಯಕ್ರಮ ಎಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ಪರಿಶೀಲಿಸಬಹುದಾಗಿದೆ. ಇದನ್ನು ಯೋಜನಾ ಆಯೋಗವು ಒಂದುಗೂಡಿಸಬೇಕಾಗಿದೆ. ಉದಾಹರಣೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮುಸ್ಲಿಮರಿಗೆ ತಮ್ಮ ಪಾಲು ಸರಿಯಾಗಿ ದೊರಕುತ್ತಿಲ್ಲ (ಬ್ಯಾಂಕ್‌ಗಳಲ್ಲಿ ಅವರ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಸಾಲ ದೊರೆಯುತ್ತಿಲ್ಲ). ಅದರಲ್ಲಿ ಶೇ. 14ರಷ್ಟು ಮುಸ್ಲಿಮರಿಗೆ ಹೋಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಇದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಅದು ಎಲ್ಲ ಅಲ್ಪಸಂಖ್ಯಾತ ರಿಗೆ ಹೋಗುತ್ತಿದೆ. ಒಳಗೊಳ್ಳುವಿಕೆಯ ಅಭಿವೃದ್ಧಿಯಲ್ಲಿ ಯಾವುದೇ ಬೆಳವಣಿಗೆಗಳಾಗಿಲ್ಲ. ಯಾವುದೇ ಅಳತೆ ಗೋಲಿಲ್ಲದೆ, ಮಾನದಂಡವಿಲ್ಲದೆ 11ನೆ ಪಂಚವಾರ್ಷಿಕ ಯೋಜನೆಯಲ್ಲೂ ಇತ್ತು. ಆದರೆ ಒಳಗೊಳ್ಳುವಿಕೆ ಇನ್ನೂ ಸರಕಾರದ ದಾಖಲೆಗಳಲ್ಲಿ ಕಾಣುತ್ತಿಲ್ಲ.
ಪ್ರಶ್ನೆ: ಮುಸ್ಲಿಮರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ನೀವು ಬಯಸುತ್ತೀರಾ?
ಶರೀಫ್: ಉದ್ಯೋಗದಲ್ಲಿ ಮೀಸಲಾತಿಯ ಕುರಿತು ಸಾಚಾರ್ ಸಮಿತಿಯು ಯಾವುದೇ ನಿಲುವು ತಳೆದಿಲ್ಲ. ಆದರೆ ಮೂಲ ವಿಷಯಗಳ ಕುರಿತು ಮಾತ್ರ ಅದು ಪರಿಶೀಲಿಸಿದೆ. ಉನ್ನತ ಶಿಕ್ಷಣದಲ್ಲಿ ತುಂಬಾ ಕೊರತೆಯಿದೆ. ಜನರು ಉನ್ನತ ಶಿಕ್ಷಣಕ್ಕೆ ಹೋಗುವುದಕ್ಕೆ ನೀವು ಪ್ರೋತ್ಸಾಹಿಸಬೇಕು. ಉನ್ನತ ಮಟ್ಟದಲ್ಲಿನ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಏನಾದರೂ ಮಾಡಬೇಕು. ಅದನ್ನು ನೀವು ಹೇಗೆ ಮಾಡುತ್ತೀರಿ? ಅದನ್ನು ನೀವು ಮೀಸಲಾತಿಯ ಮೂಲಕ ಮಾಡಬೇಕು ಮತ್ತು ಅಲ್ಲಿಗೆ ಹೋಗುವಂತಹ ವಾತಾವರಣವನ್ನು ನೀವು ಸೃಷ್ಟಿಸಬೇಕು. ಹೀಗಾಗಿ ಉನ್ನತ ಶಿಕ್ಷಣದಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿಯ ಆವಶ್ಯಕತೆಯಿದೆ. ಸರಕಾರವು ಉದ್ಯೋಗ ಅವಕಾಶಗಳನ್ನೂ ಹೆಚ್ಚಿಸಬೇಕು.
ಪ್ರಶ್ನೆ: ನೀವು ವೈಯಕ್ತಿಕವಾಗಿ ಮೀಸಲಾತಿ ಯನ್ನು ಬಯಸುತ್ತೀರಾ?
ಶರೀಫ್: ಸರಕಾರಿ ವಲಯದ ಉದ್ಯೋಗದಲ್ಲಿ ಮುಸ್ಲಿಮರಿಗೆ ಅವಕಾಶಗಳನ್ನು ಹೆಚ್ಚಿಸಲು ಮೀಸಲಾತಿ ಅತ್ಯಾವಶ್ಯಕವಾಗಿದೆ.
ಪ್ರಶ್ನೆ: ಮುಸ್ಲಿಮರಿಗೆ ಉತ್ತಮ ಯೋಜನೆ ಗಳನ್ನು ಜಾರಿಗೊಳಿಸಿರುವ ಕೆಲವು ರಾಜ್ಯಗಳನ್ನು ತಾವು ಗುರುತಿಸಬಲ್ಲಿರಾ?
ಶರೀಫ್: ಹೀನಾಯ ಸ್ಥಿತಿಯಿರುವ ರಾಜ್ಯಗಳ ಬಗ್ಗೆ ಮಾತ್ರ ನಾನು ಮಾತನಾಡಬಹುದು.
ಪ್ರಶ್ನೆ: ಆ ಬಗ್ಗೆ ಮಾಹಿತಿ ಕೊಡಿ.
ಶರೀಫ್: ಪಶ್ಚಿಮ ಬಂಗಾಳ ತುಂಬಾ ಹೀನಾಯ ಸ್ಥಿತಿಯಲ್ಲಿದೆ, ಪ್ರಸ್ತುತ ಸರಕಾರದಲ್ಲೂ ಅದೇ ರೀತಿ ಮುಂದುವರಿದಿದೆ. ಅಲ್ಲಿನ ನೂತನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹಿಂದಿನ ಎಡರಂಗ ಸರಕಾರ ಮಾಡಿರುವ ನೀತಿಗಳನ್ನೇ ಪಾಲಿಸುತ್ತಿದ್ದಾರೆ. ಇನ್ನುಳಿದವುಗಳಲ್ಲಿ ಬಿಹಾರ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶ. ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತದಲ್ಲಿ ನಾವು ಸ್ವಲ್ಪ ಧನಾತ್ಮಕ ಫಲಿತಾಂಶವನ್ನು ನೋಡುತ್ತಿದ್ದೇವೆ, ಆದರೆ ಈ ಬಗ್ಗೆ ನನಗೆ ಇನ್ನೂ ಸಮಾಧಾನವಾಗಿಲ್ಲ. ಅವರು ಕೂಡ ಅದೇ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಮರಿಗಾಗಿ ಉರ್ದು ಶಾಲೆಗಳನ್ನು ತೆರೆದಿದ್ದಾರೆ, ಅದು ಗುರುತಿಸುವಿಕೆ ರಾಜಕಾರಣದ ಭಾಗವೇ ಆಗಿದೆ. ಉತ್ತರ ಪ್ರದೇಶದಲ್ಲಿ ಯೋಜನೆಯ ವಿಷಯವಿದೆ. ಆದರೆ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮುಸ್ಲಿಮರಿಗೆ ಹೆಚ್ಚಿನ ಅವಕಾಶಗಳು ನೀಡಿಲ್ಲ.
ಪ್ರಶ್ನೆ: ಪಶ್ಚಿಮ ಬಂಗಾಳದಲ್ಲಿ ಏನು ತಪ್ಪಾಗಿದೆ?
ಶರೀಫ್: ಆಡಳಿತದ ವಿಷಯದಲ್ಲಿ ಮುಸ್ಲಿಮರ ಪಾಲಿಗೆ ಕಮ್ಯೂನಿಸ್ಟರು ತುಂಬಾ ಹೀನಾಯರು. ಅವರು ಧಾರ್ಮಿಕತೆಯ ಕುರಿತು ಮಾತನಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅದನ್ನೇ ಮಾಡುತ್ತಾರೆ. ಸಣ್ಣ ಗುಂಪೊಂದು ಇಲ್ಲಿ ಅಧಿಕಾರವನ್ನು ನಿಯಂತ್ರಿಸುತ್ತಿದೆ. ಅವರ ನಿಯಮಗಳು ಒಳಗೊಳ್ಳುವಿಕೆಯ ನೀತಿಯನ್ನು ಹೊಂದಿಲ್ಲ. ಆದರೆ ಗುಜರಾತ್‌ಗೆ ಹೋಲಿಸಿದರೆ, ಇತರ ಎಲ್ಲ ರಾಜ್ಯಗಳೂ ಭದ್ರತೆಯನ್ನು ಒದಗಿಸಿವೆ.
ಪ್ರಶ್ನೆ: ಗುಜರಾತ್‌ನಲ್ಲಿ ಏನು ತಪ್ಪಾಗಿದೆ?
ಶರೀಫ್: ಗುಜರಾತ್ ಬಗ್ಗೆ ಹೇಳಿಕೆ ನೀಡಲು ನಾನು ಬಯಸುವುದಿಲ್ಲ.
ಪ್ರಶ್ನೆ: ಒಳ್ಳೆಯದನ್ನು ಮಾಡಿರುವ ರಾಜ್ಯಗಳ ಬಗ್ಗೆ ನಮಗೆ ತಿಳಿಸಿ
ಶರೀಫ್: ಹೋಲಿಸಿ ನೋಡಿದಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಉತ್ತಮವಾಗಿವೆ. (ಉದ್ಯೋಗದ ವಿಷಯದಲ್ಲಿ ಆದ್ಯತೆ ಕಡಿಮೆ ನೀಡಿವೆಯಾದರೂ, ಇತರ ವಿಷಯಗಳಲ್ಲಿ ಉತ್ತಮವಾಗಿವೆ.)
ಪ್ರಶ್ನೆ: ಮುಸ್ಲಿಮರನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವ ಬಗ್ಗೆ ಮಾತನಾಡುವುದಾದರೆ ನೀವು ಸಂಕ್ಷಿಪ್ತವಾಗಿ ಏನನ್ನು ಹೇಳಲು ಬಯಸುತ್ತೀರಿ?
ಶರೀಫ್: ಇದು ತುಂಬಾ ಸರಳ. ಸಮುದಾಯ ಗಳಿಗಾಗಿ ಕಾರ್ಯನಿರ್ವಹಿಸುವ ವಲಯ, ಇಲಾಖೆ ಗಳು, ಸಚಿವಾಲಯಗಳನ್ನು ಗುರುತಿಸಬೇಕು. ಆ ಸಚಿವಾಲಯ ಮತ್ತು ಇಲಾಖೆಗಳು ನೀಡುವ ಸೇವೆಗಳನ್ನೂ ಗುರುತಿಸಬೇಕು. ಪಂಚಾಯತ್‌ನಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆಯನ್ನು ಅಧಿಕಗೊಳಿಸಿದಲ್ಲಿ ಅದೊಂದೇ ತುಂಬಾ ಬದಲಾವಣೆಗಳಿಗೆ ಕಾರಣ ವಾಗುತ್ತದೆ ಎಂದು ನಾನು ಈ ಮೊದಲೇ ತಿಳಿಸಿದ್ದೇನೆ. ಮುಸ್ಲಿಮರು ಪಂಚಾಯತ್‌ಗಳಲ್ಲಿ ಚುನಾಯಿತರಾಗು ವುದು ತೀರಾ ವಿರಳ. ಯಾಕೆಂದರೆ, ಪಂಚಾಯತ್‌ಗಳು ಜಾತಿ ಆಧಾರಿತವಾಗಿವೆ. ಪ್ರಬಲ ಜಾತಿಗಳು ಆಯ್ಕೆಯಾಗುತ್ತವೆ. 14 ಮಂದಿ ಚುನಾಯಿತರಾದರೆ, ಅವರಲ್ಲಿ ಇಬ್ಬರು ಅಲ್ಪಸಂಖ್ಯಾತರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಆಂಧ್ರ ಪ್ರದೇಶದಲ್ಲಿ 2006ರಲ್ಲಿ ಕಾನೂನೊಂದನ್ನು ಜಾರಿಗೊಳಿಸಲಾಗಿದೆ. ಇದೀಗ ಆಂಧ್ರ ಪ್ರದೇಶದಲ್ಲಿ ಕನಿಷ್ಠ 3,000 ಮಂಡಲ ಪಂಚಾಯತ್ ಸದಸ್ಯರಿದ್ದಾರೆ.
ಪ್ರಶ್ನೆ: ಇದರಿಂದಾಗಿ ಆ ರಾಜ್ಯದಲ್ಲಿ ಮುಸ್ಲಿಮರ ಸಾಮಾನ್ಯ ಸ್ಥಿತಿಗತಿಯಲ್ಲಿ ಸುಧಾರಣೆ ಯನ್ನು ಕಂಡಿದೆಯೇ?
ಶರೀಫ್: ನನಗೆ ಈ ಬಗ್ಗೆ ಗೊತ್ತಿಲ್ಲ. ಆದರೆ ತಳಮಟ್ಟದಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆ ಅಧಿಕಗೊಂಡಿದೆ. ಪಂಚಾಯತ್ ಸದಸ್ಯರಿಗೆ ಯಾವುದೆಲ್ಲ ಯೋಜನೆಗಳಿವೆ ಎಂದು ತಿಳಿದಿರುತ್ತದೆ. ಯಾವ ರೀತಿ ಅವುಗಳನ್ನು ಜಾರಿಗೊಳಿಸಬೇಕೆಂದೂ ಅವರಿಗೆ ತಿಳಿದಿರುತ್ತದೆ. ಅವರನ್ನು ನಾಮಕರಣ ಸದಸ್ಯರಿಗೆ ಮತದಾನದ ಹಕ್ಕಿರುವುದಿಲ್ಲ. ಆದರೆ ಅದರಿಂದ ಸಮಸ್ಯೆ ಏನೂ ಇಲ್ಲ. ಕನಿಷ್ಠಪಕ್ಷ ಮಾಹಿತಿಯ ಹಂಚಿಕೆಯಾದರೂ ಆಗುತ್ತದೆ. ಮೀಸಲಾತಿಯು ಪರಿಹಾರವಲ್ಲ, ಆದರೆ ಪಾಲ್ಗೊಳ್ಳುವಿಕೆಯು ಪರಿಹಾರವಾಗಿದೆ. ಮುಸ್ಲಿಮರಲ್ಲಿ ಐಎಎಸ್ ಅಧಿಕಾರಿಗಳು, ಸಚಿವರು ಇಲ್ಲದಿದ್ದರೆ ನನಗೆ ಬೇಸರವಿಲ್ಲ. ಆದರೆ ತಳಮಟ್ಟದಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆ ಅಧಿಕವಾಗಿರಬೇಕು.
ಪ್ರಶ್ನೆ: ಸಾಮಾಜಿಕ ನ್ಯಾಯ ಅಧ್ಯಯನ ಕೇಂದ್ರ ಮತ್ತು ಬಜೆಟ್ ಮತ್ತು ಸರಕಾರಿ ಹೊಣೆಗಾರಿಕೆಯ ಕೇಂದ್ರಗಳು ಸಾಚಾರ್ ಸಮಿತಿಯ ಶಿಫಾರಸುಗಳಿಗೆ ಭಿನ್ನವಾಗಿ ಸರಕಾರದ ಸಾಧನೆಗಳನ್ನು ಹೊಗಳಿವೆ. ಅವರು ಪತ್ತೆ ಹಚ್ಚಿರುವ ಅಂಶಗಳನ್ನು ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಟೀಕಿಸಿದ್ದಾರೆ.
ಶರೀಫ್: ಸಾಮಾಜಿಕ ನ್ಯಾಯ ಅಧ್ಯಯನ ಕೇಂದ್ರವು ಎರಡು ವಿಷಯಗಳನ್ನು ಸ್ಪಷ್ಟವಾಗಿ ಬೆಳಕಿಗೆ ತಂದಿದೆ. ಮುಸ್ಲಿಮರು ಅಧಿಕವಾಗಿರುವ ಪ್ರದೇಶಗಳಲ್ಲಿ ಸರಿಯಾದ ಶಾಲೆಗಳಿಲ್ಲ ಎಂಬುದನ್ನು ಅದು ಪತ್ತೆ ಹಚ್ಚಿದೆ. ಶಾಲೆಗಳಿದ್ದರೂ, ಅವುಗಳು ಸಮುದಾಯ (ಮುಸ್ಲಿಮರು) ದಿಂದ ನಡೆಸಲ್ಪಡುತ್ತಿಲ್ಲ ಎಂಬುದನ್ನು ಅದು ತಿಳಿಸಿದೆ. ಹೈದರಾಬಾದ್‌ನಲ್ಲಿ ಸಂಪೂರ್ಣ ಮುಸ್ಲಿಮರು ಇರುವ ಪ್ರದೇಶವೊಂದರಲ್ಲಿ ಬ್ರಾಹ್ಮಣ ಹುಡುಗಿಯೊಬ್ಬಳು ಅಂಗನವಾಡಿ ನಡೆಸುತ್ತಿರುವುದನ್ನು ನಾನು ನೋಡಿದ್ದೇನೆ. ಸ್ಥಳೀಯರು ಅಂಗನವಾಡಿಗಳನ್ನು ನಡೆಸಬೇಕು ಎಂಬ ನಿಯಮವಿದ್ದರೂ, ಅದನ್ನು ನಡೆಸಲು ಆಕೆ 10 ಕಿ.ಮೀ. ದೂರದಿಂದ ಅಲ್ಲಿಗೆ ಬರುತ್ತಾಳೆ.
ದಿಲ್ಲಿ ಸಾರಿಗೆ ನಿಗಮದಲ್ಲಿ 3000 ಡಿಟಿಸಿ ಬಸ್ಗಳಿವೆ. ಅವುಗಳಲ್ಲಿ 5,000 ಚಾಲಕರಿದ್ದಾರೆ. ಅವರಲ್ಲಿ ತಾಂತ್ರಿಕವಾಗಿ ತುಂಬಾ ಚತುರರಾಗಿರುವ ಎಷ್ಟು ಜನ ಮುಸ್ಲಿಮರಿದ್ದಾರೆ ಎಂದು ನಾನು ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರನ್ನು ಪ್ರಶ್ನಿಸಿದ್ದೆ. ಡಿಟಿಸಿಯಲ್ಲಿ ಕೇವಲ ಶೇ.3ರಷ್ಟು ಮುಸ್ಲಿಮರಿರುವುದನ್ನು ತಿಳಿದು ಅವರು ಚಕಿತರಾಗಿದ್ದರು. ‘ಯಾಕೆ ಹೀಗಾಗಿದೆ ಎಂದು ನನಗೆ ತಿಳಿದಿಲ್ಲ’ ಎಂದು ಆಕೆ ನನ್ನಲ್ಲಿ ಹೇಳಿದರು. ಅವರು ಚಾಲಕರನ್ನೇ ಸೇರಿಸಿಕೊಂಡಿಲ್ಲ, ಅವರು ಎಲ್ಲಿಗೆ ಹೋಗಬೇಕು? ನೀವು ಅವರಿಗೆ ಅವಕಾಶಗಳನ್ನು ನೀಡಬೇಕು. ಅವರಿಗೆ ಮಾಲಕತ್ವವನ್ನು ನೀಡಿ.
-----------------------------------------------
-----------------------------------------------
ರಾತ್ರಿ ದೀಪಸ್ಥಂಬದಡಿಯಲ್ಲಿ ಅವನು ಏನನ್ನೋ ಹುಡುಕ್ಕುತ್ತಿದ್ದ, ಕೇಳಿದೆ;
ಏನನ್ನು ಹುಡುಕುತ್ತಿದ್ದೀಯಾ? ಸಹಾಯಿಸಲೇ? ಹೇಳಿದ;
ಅನರ್ಘ್ಯ ವಸ್ತುವೊಂದು ಕಳೆದು ಹೋಗಿದೆ, ಸಿಗುತ್ತಿಲ್ಲ... ಕೇಳಿದೆ;
ಎಲ್ಲಿ?? ಹೇಳಿದ;
ಕಳೆದಿದ್ದು ಎಲ್ಲೆಂದು ಚೆನ್ನಾಗಿ ಗೊತ್ತಿದೆ, ಆದರೆ ಅಲ್ಲಿ ಕತ್ತಲು, ಕಗ್ಗತ್ತಲು... ಬೆಳಕಿಲ್ಲ... ಅದಕ್ಕೆ ಇಲ್ಲಿ ಹುಡುಕುತ್ತಿದ್ದೇನೆ ....
-------
------
ಗುಬ್ಬಚ್ಚಿಯ ಹಾಗೆ ನೀ ಗೂಡ ಕಟ್ಟದಿರು
ಗರುಡಪಕ್ಷಿಗೆ ಗೂಡು ಒಲ್ಲದು;
ನೀ ಹಾರುತಲಿರು ಮೋಡಗಳ ಮೇರೆ ಮೀರಿ
ಹಾರಾಟದ ಖುಷಿಯರಿತ ಗರುಡನಿಗೆ
ಹಾರಾಟದಲ್ಲಿ ರೆಕ್ಕೆಗಳು ಸೋಲದು॥
------
-----------------------------
ನಿನ್ನ ಮುಖ ನಿನ್ನ ದೇಹ
ನೀನಲ್ಲ ನಿನ್ನದು...
ನಿನ್ನ ಶರ್ಟು ನಿನ್ನ ಪ್ಯಾಂಟು ನಿನ್ನ ಸೂಟಿದ್ದಂತೆ...
ನಿನ್ನೊಳಗಿರುವ ನೀನೇ ನೀನು
ಆ ನೀನು ನಿಜದ ನೀನು
ಆ ನಿನಗೆ ಬಿಂಬವಿಲ್ಲ
ಬಿಂಬವಿಲ್ಲದ್ದು ಶಾಶ್ವತ
ಕನ್ನಡಿಯ ಮುಂದಿನಿಂದ ನೀನು ಸರಿದಾಗ
ಬಿಂಬ ಮಾಯವಾದಂತೆ
ದೇಹದಿಂದ ಆ ನೀನು ಸರಿದಾಗ
ಗಿಣಿಯು ಪಂಜರ ಬಿಟ್ಟಂತೆ
ನಿಜದ ನಿನಗೆ ಮೋಕ್ಷ
ಆ ನೀನು ಚಿರಂತನ
----------------------
ನಿನ್ನ ಮುಖ ನಿನ್ನ ದೇಹ
ನೀನಲ್ಲ ನಿನ್ನದು...
ನಿನ್ನ ಶರ್ಟು ನಿನ್ನ ಪ್ಯಾಂಟು ನಿನ್ನ ಸೂಟಿದ್ದಂತೆ...
ನಿನ್ನೊಳಗಿರುವ ನೀನೇ ನೀನು
ಆ ನೀನು ನಿಜದ ನೀನು
ಆ ನಿನಗೆ ಬಿಂಬವಿಲ್ಲ
ಬಿಂಬವಿಲ್ಲದ್ದು ಶಾಶ್ವತ
ಕನ್ನಡಿಯ ಮುಂದಿನಿಂದ ನೀನು ಸರಿದಾಗ
ಬಿಂಬ ಮಾಯವಾದಂತೆ
ದೇಹದಿಂದ ಆ ನೀನು ಸರಿದಾಗ
ಗಿಣಿಯು ಪಂಜರ ಬಿಟ್ಟಂತೆ
ನಿಜದ ನಿನಗೆ ಮೋಕ್ಷ
ಆ ನೀನು ಚಿರಂತನ
----------------------
No comments:
Post a Comment